ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯ ಬಗ್ಗೆ ತಿಳಿದರೆ ನಿಮ್ಮ ಮೈ ರೋಮಾಂಚನಗೊಳ್ಳುತ್ತದೆ.. ಇಂತಹ ವೀರ ಯೋಧನ‌ ಬಗ್ಗೆ ಹಲವು ಮಾಹಿತಿ ಇಲ್ಲಿದೆ ಓದಿ ತಪ್ಪದೇ ಶೇರ್ ಮಾಡಿ..

ಜೈ ಶೇಗುಣಸಿ ಸುದ್ದಿ....

ಸಂಗೊಳ್ಳಿ ರಾಯಣ್ಣ ಎಂಬ ಹೆಸರು ಕೇಳಿದ‌ ಕೂಡಲೇ ನಮ್ಮ ಮೈ ರೋಮಾಂಚನಗೊಳ್ಳುತ್ತದೆ. ಹೌದು ನಮ್ಮ ರಾಯಣ್ಣ ಹುಟ್ಟಿದ್ದು ಆಗಸ್ಟ್ 15 1798 ಕಿತ್ತೂರಿನಿಂದ 14 ಕಿ.ಮೀ ದೂರವಿರುವ ಸಂಗೊಳ್ಳಿಯಲ್ಲಿ. ಇವರ ತಂದೆ ಬರಮಪ್ಪ ಮತ್ತು ತಾಯಿ ಕೆಂಚವ್ವ. ಇನ್ನು ಹುಲಿಯ ಹೊಟ್ಟೆಯಲ್ಲಿ‌ ಹುಲಿಯೇ ಹುಟ್ಟುತ್ತದೆ ಎಂಬ ಮಾತಿಗೆ ನಮ್ಮ ರಾಯಣ್ಣ ನಿದರ್ಶನವಾಗುತ್ತಾರೆ. ಏಕೆಂದರೆ ರಾಯಣ್ಣನವರ ತಾತ ರಾಗಪ್ಪ ಗಿಡಮೂಲಿಕೆಗಳಿಂದ ಔಷಧಿಗಳನ್ನು ತಯಾರಿಸಿ ಜನರ ಕಾಯಿಲೆಗಳನ್ನು ನಿವಾರಿಸುತ್ತಿದ್ದರು. ಇನ್ನು ಇವರ ತಂದೆ ಬರಮಪ್ಪ ಜನರಿಗೆ ಕಾಡುತ್ತಿದ್ದ ಹುಲಿಯೊಂದನ್ನು ಕತ್ತಿಯಿಂದ ಕೊಂದು ತಮ್ಮ ವೀರತನದಿಂದ ಅಲ್ಲಿನ‌ರಾಜನಾಗಿದ್ದ ಮಲ್ಲಸರ್ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಸಾಹಸದಿಂದ ಕಿತ್ತೂರಿನ ಸಂಸ್ಥಾನದಲ್ಲಿ ಪ್ರಸಿದ್ಧಿಯಾಯಿತು.
ಇನ್ನು ಇಲ್ಲಿದ್ದ ಸಂಗೊಳ್ಳಿ ಗರಡಿಮನೆ ಬಹಳ ಪ್ರಸಿದ್ಧವಾಗಿತ್ತು. ಇಲ್ಲಿನ ಎಲ್ಲಾ ಯುವಕರು ಇಲ್ಲಿನ ಗರಡಿ ಮನೆಗೆ ಬಂದು ಕತ್ತಿವರಸೆ , ಕವಣೆ ಕುಣಿತ, ದೊಣ್ಣೆ ವರಸೆ, ಗುರಿ ಹೊಡೆತ ಗಳನ್ನೊಳಗೊಂಡ ಹಲವು ವಿದ್ಯೆಗಳನ್ನು ಕಲಿತು ಯುದ್ಧ ಮಾಡುವ ಜಾಣ್ಮೆಯನ್ನು ತಿಳಿದು ಕಿತ್ತೂರಿಗೆ ಸೇವೆ ಸಲ್ಲಿಸಲು ಅಲ್ಲಿನ ಸೇನೆಗೆ ಸೇರುತ್ತಿದ್ದರು. ಸಂಗೊಳ್ಳಿ ರಾಯಣ್ಣರೂ ಸಹ ಇದೇ ಗರಡಿಯಲ್ಲಿ ಪಳಗಿದ್ದರು. ಇನ್ನು ಅಮಟೂರಿನ ಬಾಳಪ್ಪ, ಚೆನ್ನಬಸವಣ್ಣ ಮತ್ತು ರಾಯಣ್ಣ ಎಲ್ಲರೂ ಒಟ್ಟಾಗಿ ಗರಡಿಯಲ್ಲಿ ಪಳಗಿ ಹಲವು ಯುದ್ಧ ಕಲೆಗಳನ್ನು ಕಲಿತು ಆಪ್ತ ಸ್ನೇಹಿತರಾಗಿದ್ದರು. ಬಾಳಪ್ಪ ಗುರಿ ಹೊಡೆತದಲ್ಲಿ ನಿಸ್ಸೀಮ. ಇನ್ನು ಎಲ್ಲಾ ಕಲೆಗಳಲ್ಲಿ ಪರಿಣಿತನಾಗಿದ್ದ ರಾಯಣ್ಣ ವೇಗವಾಗಿ ಓಡುವುದರಲ್ಲಿ ಸೋಲಿಲ್ಲದ ಸರದಾರ.

ಸಿರಿತನದಿಂದ ತುಂಬಿ ತುಳುಕುತ್ತಿದ್ದ ಕಿತ್ತೂರು ಸಂಸ್ಥಾನದಲ್ಲಿ ಜನರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಈ ಸಮಯದಲ್ಲಿ ಭಾರತವನ್ನು ಹಾಗೂ ಹಲವು ಸಂಸ್ಥಾನಗಳನ್ನು ತನ್ನ‌ ತೆಕ್ಕೆಗೆ ತೆಗೆದುಕೊಂಡಿದ್ದ ಬ್ರಿಟೀಷ್ ಸರ್ಕಾರಕ್ಕೆ ಸಿರಿ ಸಂಪತ್ತಿನಿಂದ ತುಂಬಿ ತುಳುಕುತ್ತಿದ್ದ ಕಿತ್ತೂರು ಕಣ್ಣಿಗೆ ಬಿದ್ದಿತ್ತು. ಇನ್ನು ಈ ಸಂಸ್ಥಾನದ ರಾಜ ಮಲ್ಲಸರ್ಜನ ಮರಣದ ನಂತರ ಮಕ್ಕಳಿಲ್ಲದೆ ಪರಿತಪಿಸುತ್ತಿದ್ದ ರಾಣಿ ಚೆನ್ನಮ್ಮ ಕಿತ್ತೂರಿನ‌ ಸಿಂಹಾಸನ ಏರಿ ರಾಜನು ನಿಭಾಯಿಸಬೇಕಾದ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದರು. ಈ ವೇಳೆಗಾಗಲೇ ಬ್ರಿಟೀಷರ ಕಣ್ಣು ಕಿತ್ತೂರಿನ ಮೇಲಿತ್ತು.

ಕಿತ್ತೂರಿನ ಮೇಲೆ ಅತೀವ ಪ್ರೀತಿ ಮತ್ತು ನಾಡಭಕ್ತಿ ಹೊಂದಿದ್ದ ರಾಯಣ್ಣ ತನ್ನ ಸ್ನೇಹಿತರಾದ ಬಾಳಪ್ಪ ಮತ್ತು ಚೆನ್ನಬಸವಣ್ಣರ ಜೊತೆಗೂಡಿ ಕಿತ್ತೂರಿನ ಸೇನೆಯ ಮುಂದಾಳುಗಳನ್ನು ಭೇಟಿ ಮಾಡಿ ತಾವು ಗರಡಿಯಲ್ಲಿ ಕಲಿತಿದ್ದ ವಿದ್ಯೆಗಳನ್ನು ಅವರ ಮುಂದೆ ಪ್ರದರ್ಶಿಸುತ್ತಿದ್ದರು. ಇವರ ಕಲೆಗಳನ್ನು ನೋಡಿದ ರಾಣಿ ಚೆನ್ನಮ್ಮ ಈ ಮೂವರನ್ನೂ ತನ್ನ ಸೇನೆಯ ಕಾವಲು ಪಡೆಯ ಮುಂದಾಳತ್ವದ ಕೆಲಸ ವಹಿಸಿದರು.

ಮಕ್ಕಳಿಲ್ಲದ ರಾಣಿ ಚೆನ್ನಮ್ಮ ಮುಂದಾಲೋಚನೆಯಿಂದ ತನ್ನ ನಂತರ ಕಿತ್ತೂರಿನ ಅರಸು ಪಟ್ಟಕ್ಕಾಗಿ ಶಿವಲಿಂಗ ಎಂಬ ಹುಡುಗನನ್ನು ದತ್ತು ಪಡೆದು ಆ ಹುಡುಗನಿಗೆ ಅರಸು ಪಟ್ಟ ಕಟ್ಟಿದಳು. ಈ ಹೊತ್ತಿಗೆ ಕಪಟಿ ಬ್ರಿಟೀಷ್ ಸರ್ಕಾರ ದತ್ತು ಪಡೆದ ಮಕ್ಕಳಿಗೆ ಅರಸು ಪಟ್ಟ ಕಟ್ಟುವ ಹಾಗಿಲ್ಲ‌ ಎಂಬ ಕಟ್ಟುಪಾಡನ್ನು ಜಾರಿಗೆ ತಂದರು. ಏಕೆಂದರೆ ಮಕ್ಕಳಿಲ್ಲದ ಸಂಸ್ಥಾನಗಳನ್ನು ತನ್ನ‌ ತೆಕ್ಕೆಗೆ ತೆಗೆದುಕೊಳ್ಳಬೇಕೆಂದುದೇ ಇದರ‌ ಹಿಂದಿರುವ ನಿಜವಾದ ಕಾರಣ.

ಈ‌ ಸಮಯದಲ್ಲಿ‌ ಧಾರವಾಡ ಜಿಲ್ಲೆಯ ಕಲೆಕ್ಟರ್ ಸ್ಥಾನದಲ್ಲಿದ್ದ ತ್ಯಾಕರೆ ಎಂಬಾತ ಹೇಗಾದರೂ ಮಾಡಿ ಕಿತ್ತೂರನ್ನು ತನ್ನ ವಶ ಮಾಡಿಕೊಳ್ಳಬೇಕೆಂದು ಆಲೋಚಿಸುತ್ತಿದ್ದನು. ಆದ್ದರಿಂದ ದತ್ತು ಪುತ್ರರ ಸಂಸ್ಥಾನ ನಡೆಸುತ್ತಿರುವವರು ಕಪ್ಪ ನೀಡಬೇಕೆಂದು ರಾಣಿ ಚೆನ್ಮಮ್ಮನ‌ ಮುಂದೆ ಬಂದು ತನ್ನ ಬೇಡಿಕೆಯನ್ನು ಇಟ್ಟನು. ಆದರೆ ಚೆನ್ನಮ್ಮ ಇದನ್ನು ತಿರಸ್ಕರಿಸಿ ಅವರ ವಿರುದ್ಧ ಘರ್ಜಿಸಿದಳು.

1824 ಅಕ್ಟೋಬರ್ 21 ನೇ ತಾರೀಖಿನಂದು ಕಪ್ಪ ನೀಡಲು ನಿರಾಕರಿಸಿದ ಕಾರಣ ಕಿತ್ತೂರಿನ ಮೇಲೆ ತ್ಯಾಕರೆ ದಂಡೆತ್ತಿ ಬಂದನು. ಇದಕ್ಕೆ ಹೆದರದ ದಿಟ್ಟ ಚೆನ್ನಮ್ಮ ತನ್ನ ಕೋಟೆಯ ಬಾಗಿಲನ್ನು ಧೈರ್ಯವಾಗಿ ತೆರೆಸಿ ತನ್ನ ಸೇನೆಯನ್ನು ಬ್ರಿಟೀಷರ ಮೇಲೆ ಬಿಟ್ಟಾಗ ದೊಡ್ಡ ಯುದ್ಧವೇ ನಡೆಯಿತು. ಸೇನಯ ಮುಂದಾಳತ್ವವನ್ನು ವಹಿಸಿದ್ದ ರಾಯಣ್ಣ , ಬಾಳಪ್ಪ ಮತ್ತು ಚೆನ್ನಬಸವಣ್ಣ ಕೆಚ್ಚೆದೆಯಿಂದ ಹೋರಾಡಿದರು. ಈ ವೇಳೆ ಬಾಳಪ್ಪನ ಕೋವಿಯಿಂದ ಹಾರಿದ ಗುಂಡೊಂದು ತ್ಯಾಕರೆಯ ತಲೆಯನ್ನು ನೆಲಕ್ಕುರುಳಿಸಿತು. ತ್ಯಾಕರೆಯ ರುಂಡವನ್ನು ಕಿತ್ತೂರಿನ ಸೈನಿಕನೊಬ್ಬ ತನ್ನ ಕತ್ತಿಗೆ ಚುಚ್ಚಿಕೊಂಡು ಅದನ್ನು ಮೇಲೆತ್ತಿ ಸಂಭ್ರಮಿಸಿದನು. ಇದರಿಂದ ಹೆದರಿದ ಆಂಗ್ಲ ಪಡೆ ಅಲ್ಲಿಂದ ಪರಾರಿಯಾಯಿತು. ಈ ಯುದ್ಧದಲ್ಲಿ ರಾಯಣ್ಣ ತನ್ನ ವೀರಾವೇಶ ಮೆರೆದಿದ್ದನು.

ಕಿತ್ತೂರು ಸಂಸ್ಥಾನದ ವಿರುದ್ಧ ಸೋತ ಬ್ರಿಟೀಷ್ ಸರ್ಕಾರ ಸೇಡನ್ನು ತೀರಿಸಿಕೊಳ್ಳಲು ಹವಣಿಸುತ್ತಿತ್ತು. ಚೆನ್ನಮ್ಮನನ್ನು ಬಂಧಿಸದಿದ್ದರೆ ಬೇರೆ ರಾಜ್ಯದ ರಾಜ್ಯದ ಅರಸರೂ ಸಹ ತಮ್ಮ ವಿರುದ್ಧ ಬರಬಹುದು ಎಂಬ ಭಯದಿಂದಿದ್ದ ಆಂಗ್ಲರು ತಮ್ಮ ಸೇನೆಯನ್ನು ಒಟ್ಟುಗೂಡಿಸಿ ಮೂರು ತಿಂಗಳ ನಂತರ ಅಂದರೆ ಡಿಸೆಂಬರ್ 3 1824 ರಂದು ಕಿತ್ತೂರಿನ ಮೇಲೆ ದಾಳಿ ಮಾಡಿ ಗೆಲುವು ತಮ್ಮದಾಗಿಸಿಕೊಂಡರು. ಬ್ರಿಟೀಷರು ಗೆಲ್ಲುವಂತೆ ಮಾಡಲು ಮಲ್ಲಪ್ಪ ಶೆಟ್ಟಿಯಂತಹ ನಾಡದ್ರೋಹಿಗಳು ಕಿತ್ತೂರಿನ ತೋಪುಗಳು ಕಾರ್ಯ ನಿರ್ವಹಿಸಿದಂತೆ ಅವುಗಳಿಗೆ ನೀರು ತುಂಬಿದ್ದರು. ಈ ಬಾರಿ ಗೆಲುವು ಸಾಧಿಸಿದ ಆಂಗ್ಲರು ರಾಣಿ ಚೆನ್ನಮ್ಮನ ಜೊತೆ ಅವರ ಮನೆಯವರೆಲ್ಲರನ್ನೂ ಸೆರೆಮನೆಗೆ ತಳ್ಳಿದರು. ಆದರೆ ರಾಯಣ್ಣ , ಚೆನ್ನಬಸವಣ್ಣರನ್ನು ಕೆಲಹೊತ್ತು ಸೆರೆಮನೆಯಲ್ಲಿಟ್ಟು ನಂತರ ಬಿಡುಗಡೆಗೊಳಿಸಿದರು.

ಸೆರೆಮನೆಯಲ್ಲಿದ್ದ ರಾಣಿ ಚೆನ್ನಮ್ಮಳನ್ನು ಭೇಟಿಯಾಗಲು ರಾಯಣ್ಣ ಮಾರುವೇಷದಲ್ಲಿ ಸೆರೆಮನೆಗೆ ಭೇಟಿ‌ ನೀಡಿ ತಾನು ಕಿತ್ತೂರಿನ ಉಪ್ಪು ತಿಂದು ಬೆಳೆದಿದ್ದು ಹೆಗಾದರೂ ಮಾಡಿ ಕಿತ್ತೂರನ್ನು ಮತ್ತೆ ತಮ್ಮ ವಶ ಮಾಡಿಕೊಳ್ಳುವುದಾಗಿ ಮಾತು ನೀಡಿದನು.

ಯುದ್ಧದಲ್ಲಿ‌ ಗೆದ್ದು ಬೀಗುತ್ತಿದ್ದ ಬ್ರಿಟೀಷ್ ಸರ್ಕಾರ ಕಿತ್ತೂರಿನ ಜನರ ಮೇಲೆ ತನ್ನ ದಬ್ಬಾಳಿಕೆಯನ್ನು ಮುಂದುವರೆಸಿತ್ತು. ಈ ವೇಳೆಯಲ್ಲಿ ರಾಯಣ್ಣನ ತಾಯಿ ಕೆಂಚಮ್ಮಳಿಗೆ ಬ್ರಿಟೀಷ್ ಸರ್ಕಾರದ ಗುಲಾಮನಾಗಿ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದ ಕುಲಕರ್ಣಿಯೊಬ್ಬ ಕಂದಾಯದ ವಿಷಯವಾಗಿ ಹಿಂಸಿಸಿದ್ದನು. ಒಂದು ಕಡೆ ಚೆನ್ನಮ್ಮಳನ್ನು ಸೆರೆಮನೆಗೆ ತಳ್ಳಿದ್ದು ಹಾಗೂ‌ ಬ್ರಿಟೀಷ್ ಸರ್ಕಾರದ ಜನರ ಮೇಲಿನ ದೌರ್ಜನ್ಯ ರಾಯಣ್ಣನನ್ನು ಕೆರಳಿಸಿತ್ತು. ಆದ್ದರಿಂದ ಇವೆಲ್ಲವನ್ನು ಕೊನೆಗಾಣಿಸಲು ರಾಯಣ್ಣ ನಿರ್ಧರಿಸಿದನು.

ಇದರ ಸಲುವಾಗಿ ಪಾಳುಬಿದ್ದಿದ್ದ ತಾನು ಪಳಗಿದ ಗರಡಿಮನೆಗೆ ಜೀವತುಂಬಿ ಅಲ್ಲಿನ ಯುವಕರನ್ನು ಒಟ್ಟುಗೂಡಿಸಿ ಅವರಿಗೆ ತರಬೇತಿ ನೀಡಲು ಶುರು ಮಾಡಿದನು.ಬ್ರಿಟೀಷರನ್ನು ತೊಲಗಿಸಿ ಕಿತ್ತೂರನ್ನು ಮತ್ತೆ ಮೊದಲಿನಂತೆ ಮಾಡಲು ರಾಯಣ್ಣ ವಡ್ಡರ ಯಲ್ಲಣ್ಣ, ಬಿಚ್ಚುಗತ್ತಿ ಚೆನ್ನಬಸವಣ್ಣ , ಗುರಿಕಾರ ಬಾಳಪ್ಪ ಹಾಗೂ ಇನ್ನು ಹಲವರನ್ನು ಗುಟ್ಟಾಗಿ ಭೇಟಿ ಮಾಡಿ ಮಾತುಕತೆ ನಡೆಸಿದನು. ಅಲ್ಲದೇ ಬ್ರಿಟೀಷರ ವಿರುದ್ಧ ಹೋರಾಡಲು ಬೇಕಾದಂತಹ ಆಯುಧಗಳಾದ ಗುಂಡು, ಕತ್ತಿ, ಮದ್ದು, ಗುರಾಣಿಗಳ ಸಂಗ್ರಹ ಮಾಡುವಲ್ಲಿ ರಾಯಣ್ಣನ ಪಡೆ ತೊಡಗಿಕೊಂಡಿತು. ಅಲ್ಲದೇ ಕಷ್ಟದಲ್ಲಿದ್ದ ಜನರಿಗೆ ಸಹಾಯ ಹಸ್ತವನ್ನು ಚಾಚುತ್ತಿತ್ತು. ಇದರಿಂದ ಬ್ರಿಟೀಷರನ್ನು ಹತ್ತಿಕ್ಕಲು ಇದು ಕೆಲಸ ಮಾಡಿತು.

ರಾಯಣ್ಣ ಹೆಸರುವಾಸಿಯಾಗುವುದನ್ನು ಕಂಡ ಬ್ರಿಟೀಷ್ ಸರ್ಕಾರ ಸಂಗೊಳ್ಳಿಯ ಲೆಕ್ಕಿಗನಾಗಿದ್ದ ಬಾಳಪ್ಪ ಹಾಗೂ ಕುಲಕರ್ಣಿಯಂತಹ ನಾಡದ್ರೋಹಿಗಳ ಮೋಸದಿಂದ ಸಂಪಗಾವಿಯ ಸುಬೇದಾರರ ಮೂಲಕ ಸಂಪಗಾವಿಯ ಜೈಲಿಗೆ ತಳ್ಳಿದರು. ಇದಾದ ನಂತರ ಜಾಮೀನಿನ ಮೇಲೆ ಹೊರಬಂದ ರಾಯಣ್ಣ ತಯಾರಿಗೊಳ್ಳುತ್ತಿದ್ದ ತನ್ನ‌ ಸೇನೆಗೆ ಹುರಿದುಂಬಿಸುವ ಕೆಲಸದಲ್ಲಿ ತೊಡಗಿಕೊಂಡನು. ಮುಂದೆ ಈ ಪಡೆಗೆ ಬೆಳವಾಡಿಯ ಗೆಳೆಯರು , ಬಾಲೆ ನಾಯಕರು, ಬಸ್ತವಾಡದ ಮೀರಸಾಬಿ, ಚಿಲಕುಂದದ ಕಾಳಿ ಭೀಮಣ್ಣ, ಅಲ್ಲದೇ ರಣಹಲಗಿ ಹನುಮಂತ ರಾಯಣ್ಣನ ಪಡೆ ಸೇರಿಕೊಂಡರು. ಕಿತ್ತೂರನ್ನು ಬ್ರಿಟೀಷರಿಂದ ಮುಕ್ತಿಗೊಳಿಸಬೇಕೆಂದು ಹವಣಿಸುತ್ತಿದ್ದ ರಾಯಣ್ಣನಿಗೆ ಏಪ್ರಿಲ್ 2 1829 ರಂದು ರಾಣಿ ಚೆನ್ನಮ್ಮನ ಸಾವಿನ ಸುದ್ದು ಬರಸಿಡಿಲಿನಂತೆ ಅಪ್ಪಳಿಸಿತು. ಇದರಿಂದ ಮೂಕನಂತಾದ ರಾಯಣ್ಣನಿಗೆ ಯಲ್ಲಣ್ಣ ಬುದ್ಧಿ ಹೇಳಿ ಬ್ರಿಟೀಷರ ವಿರುದ್ಧ ಹೋರಾಡುವಂತೆ ಹುರಿದುಂಬಿಸಿದನು. ಆಗ ಶಿವಲಿಂಗಪ್ಪನನ್ನು ಕಿತ್ತೂರಿನ ಅರಸನನ್ನಾಗಿ ಮಾಡವುದೇ ನಮ್ಮ‌ ಗುರಿಯೆಂದು ರಾಯಣ್ಣ ನಿರ್ಧರಿಸಿದನು.


ಬ್ರಿಟೀಷರ ವಿರುದ್ಧ ಹೋರಾಡಲು ಸೇನೆಯನ್ನು‌ ಕಟ್ಟಲು ಮುಂದಾದ ರಾಯಣ್ಣ ದರೋಡೆಕೋರರಾದ ಗಜವೀರ, ಬಂಡಾರಿ ಬಾಪು ರಂತಹ ಅನೇಕರ ಮನವೊಲಿಸಿ ಒಂದಾಗಿಸಿದ್ದ. ಅಲ್ಲದೇ ರಾಣಿ ಈರವ್ವನ ತವರುಮನೆಯಾಗಿದ್ದ ಶಿವಗುತ್ತಿಯ ರಾಜನ ಜೊತೆಯೂ ಮಾತನಾಡಿ ಅಲ್ಲಿಯ ಸೇನೆಯನ್ನು ತನ್ನ ಗುಂಪಿಗೆ ಸೇರಿಸಿಕೊಂಡನು. ಹೋದಕಡೆಯಲ್ಲೆಲ್ಲ ಜನರ ಮನವೊಲಿಸಿ ಅವರ ಬೆಂಬಲ ಪಡೆಯುತ್ತಾ ಸಾಗಿದ ರಾಯಣ್ಣ 3000 ಜನರ ದೊಡ್ಡ ದಂಡನ್ನೇ ಕಟ್ಟಿದನು.

ಇದನ್ನು ಅರಿತ ಬ್ರಿಟೀಷ್ ಸರ್ಕಾರ ರಾಯಣ್ಣನನ್ನು ಹತ್ತಿಕ್ಕಲು ನರಿಯಂತೆ ಹೊಂಚುಹಾಕುತ್ತಿತ್ತು. ಇದನ್ನರಿತ ರಾಯಣ್ಣ ಕಾನಾಪುರದ ಬಳಿಯ ನಂದಗಡದ ಕಾಡು ಸುರಕ್ಷಿತ ಜಾಗವೆಂದು ಅರಿತು ತನ್ನ ಗೆಳೆಯರೊಡನೆ ಕೂಡಿ ಅದನ್ನೇ ತಮ್ಮ ಅಡಗುತಾಣವಾಗಿ ಮಾಡಿಕೊಂಡನು. ಇನ್ನು ರಾಯಣ್ಣನನ್ನು ಬಗ್ಗು ಬಡಿಯಲು ಹವಣಿಸುತ್ತಿದ್ದ ಬ್ರಿಟೀಷ್ ಸರ್ಕಾರ ಸಂಪಗಾವಿ, ಬೀಡಿ, ಕಿತ್ತೂರು ಮುಂತಾದ ಕಡೆ ಸುಬೇದಾರರನ್ನು ನೇಮಿಸಿತ್ತು. ಈ ನಡುವೆ ರಾಯಣ್ಣ ತನ್ನನ್ನು ಮೋಸದಿಂದ ಬಂಧಿಸಿದ್ದ ಸಂಪಗಾವಿಯ ಸುಬೇದಾರ ಕಚೇರಿಗೆ ಬೆಂಕಿಯಿಟ್ಟು ಸುಡುವುದಾಗಿ ಪ್ರತಿಜ್ಞೆ ಮಾಡಿದನು. ಇದಕ್ಕಾಗಿ ಆಂಗ್ಲರಿಗೆ ತಾನು ನಂದಗಡದ ಹತ್ತಿರ ಬರುವುದಾಗಿ ತಿಳಿಸಿ ಸಂಪಗಾವಿಗೆ ತೆರಳಿದ ರಾಯಣ್ಣ ತನ್ನ ಪ್ರತಿಜ್ಞೆಯನ್ನು ಪೂರ್ತಿಗೊಳಿಸಿದ್ದ. ಬ್ರಿಟೀಷ್ ಸರ್ಕಾರದ ಕಚೇರಿಗಳು ಕಂಡಲ್ಲೆಲ್ಲಾ ರಾಯಣ್ಣನಿಂದ ನಾಶಗೊಳ್ಳುತ್ತಿದ್ದವು. ಗೆರಿಲ್ಲಾ ಕಾಳಗದ ಕೈಚಳಕ ಬಲ್ಲವನಾಗಿದ್ದ ರಾಯಣ್ಣ ತನ್ನ ಸಂಗಡಿಗರೊಡನೆ ಕೂಡಿ ದಿನೇ ದಿನೇ ಬ್ರಿಟೀಷ್ ಸರ್ಕಾರಕ್ಕೆ ಸಿಂಹಸ್ವಪ್ನನಾಗಿದ್ದ. ಇದರಿಂದ ಆಂಗ್ಲರು ಹಗಲಿರುಳು ನಿದ್ರೆಗೆಡುವಂತಾಯಿತು.

ರಾಯಣ್ಣನನ್ನು ಬಂಧಿಸುವ ಸಲುವಾಗಿ ಬ್ರಿಟೀಷ್ ಸರ್ಕಾರ ಧಾರವಾಡದ ಮೇಜರ್ ರಾಸ್, ಮೇಕರ್ ಪಿಕರಿಂಗ್, ಅಮಲ್ದಾರ್ ಕೃಷ್ಣರಾಯ ಕಲೆಕ್ಟರ್ ನಿಸ್ಸೆತ್ ರಿಗೆ ರಾಯಣ್ಣನನ್ನು ಬಂಧಿಸುವ ಹೊಣೆ ನೀಡಲಾಯಿತು. ಇದರ ಸಲುವಾಗಿ ಅಮಲ್ದಾರ್ ಕೃಷ್ಣರಾಯ ತನ್ನ ಜಾಣ್ಮೆಯಿಂದ ರಾಯಣ್ಣನ‌ ಹಿಂದೆ ಲಿಂಗನಗೌಡ, ವೆಂಕನಗೌಡ ಮತ್ತು ಲಕ್ಕಪ್ಪ ಎಂಬುವರನ್ನು ರಾಯಣ್ಣನ ಹಿಂದೆ ಬಿಟ್ಟನು. ಕೆಲವು ಕಾಳಗದಲ್ಲಿ ರಾಯಣ್ಣನ ಜೊತೆಗೂಡಿ ಹೋರಾಡಿ ರಾಯಣ್ಣನಿಗೆ ಆತ್ಮೀಯನಾದ ರಾಯಣ್ಣದ ದೂರದ ಸಂಬಂಧಿ ಲಕ್ಕಪ್ಪ ಧಾರವಾಡದ ಆಳ್ನಾವರದ ಹತ್ತಿರವಿರುವ ಡೋರಿ ಎಂಬಲ್ಲಿ ಒಂದು ಗುಡ್ಡದಲ್ಲಿ ರಾಯಣ್ಣ ತನ್ನ ಸಂಗಡಿಗರೊಡನೆ ಅಡಗುತಾಣದಲ್ಲಿರುವುದನ್ನು ಕಪಟದಿಂದ ತಿಳಿದುಕೊಂಡು ಕೃಷ್ಣರಾಯನಿಗೆ ಈ ವಿಷಯವನ್ನು ತಿಳಿಸಿದನು.

ಏಪ್ರಿಲ್ 8 1830 ರಂದು ಡೋರಿ ಕೊಳ್ಳದಲ್ಲಿ ಈಜುತ್ತಿದ್ದ ರಾಯಣ್ಣನನ್ನು ಮೋಸಗಾರ ಲಕ್ಕಪ್ಪನ ಸಹಾಯದಿಂದ ಸೆರೆಹಿಡಿದರು. ಅಲ್ಲದೇ ರಾಯಣ್ಣನ ಸಂಗಡಿಗರನ್ನೂ ಸಹ ಬಂಧಿಸಿದರು. ಆದರೆ ಬಿಚ್ಚುಗತ್ತಿ ಚೆನ್ನಬಸವಣ್ಣ ಸನ್ಯಾಸಿಯಂತೆ ಮಾರುವೇಷದಲ್ಲಿದ್ದ ಕಾರಣ ಬ್ರಿಟೀಷರ ಕೈಗೆ ಸಿಗದೆ ಉಳಿದುಕೊಂಡನು. ಅಲ್ಲದೇ 1830 ರ ಡಿಸೆಂಬರ್ ನಲ್ಲಿ ರಾಯಣ್ಣನಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಂಗ್ಲರ ಕಮೀಷನರ್ ಆಂಡರ್ ಸನ್ ನ್ಯಾಯಾಲಯದಲ್ಲು ತೀರ್ಪು ನೀಡಿ ಆದೇಶಿಸಿದನು.

ಆದರೆ ತನ್ನನ್ನು ಹರಸಿ ಬೆಳೆಸಿದ ಹೋರಾಡಲು ಬೆಂಬಲಿಸಿದ ನಂದಗಡದ ಜನರ ಋಣ ತೀರಿಸಲು ನಂದಗಡದಲ್ಲಿಯೇ ತನ್ನನ್ನು ಗಲ್ಲಿಗೇರಿಸುವಂತೆ ರಾಯಣ್ಣ ತನ್ನ‌ ಕೊನೆಯ ಆಸೆಯನ್ನು ಮುಂದಿಟ್ಟನು. ಅದರಂತೆಯೇ ಜನವರಿ 26 1831 ರಂದು ರಾಯಣ್ಣನನ್ನು ಗಲ್ಲಿಗೇರಿಸಲಾಯಿತು. ಆದರೆ ಹಲವರಿಗೆ ತಿಳಿಯದ ವಿಷಯವೇನೆಂದರೆ ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ವೀರ ನಮ್ಮ ಸಂಗೊಳ್ಳಿ ರಾಯಣ್ಣ. ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಅಂದರೆ ಆಗಸ್ಟ್ 15 ರಂದು ಜನಿಸಿದ ನಮ್ಮ ರಾಯಣ್ಣ ನಮ್ಮ ದೇಶ ಗಣರಾಜ್ಯವಾದ ದಿನ ಗಲ್ಲಿಗೇರಿಸಲ್ಪಟ್ಟನು. ಅಂದಿನ‌ಈ ವೀರ ಎಲ್ಲರ‌ ಮನಸ್ಸಲ್ಲೂ ಸದಾ ಜೀವಂತ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ‌ ಶೇರ್ ಮಾಡಿ..

Comments

Popular posts from this blog

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18

"ಜೈ ಶೇಗುಣಸಿ" ದಿನದ ಸುದ್ದಿ.. 31-5-18