ಸಾವಯವ ಬೆಲ್ಲ...! (ಶೇಗುಣಸಿಯ ಬೆಲ್ಲದ ಮನೆಯ ಕುರಿತು ಒಂದಿಷ್ಟು..)
ಸಾವಯವ ಬೆಲ್ಲ (ಶೇಗುಣಸಿಯ ಬೆಲ್ಲದ ಮನೆಯ ಕುರಿತು ಒಂದಿಷ್ಟು..) ಹಸಿರು ಕ್ರಾಂತಿಯ ನೆಪದಲ್ಲಿ ಭೂಮಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಕಬ್ಬು ಬೆಳೆದು ಅದನ್ನು ಸಕ್ಕರೆ ಕಾರ್ಖಾನೆಗೆ ಕಳಿಸುವುದು ಸರ್ವೆ ಸಾಮಾನ್ಯ. ಆದರೆ ಅತೀಯಾದ ರಾಸಾಯನಿಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು ಬಂಜರು ಭೂಮಿಯಾಗುತ್ತಿದೆ. ಇಂತಹದರ ಮಧ್ಯೆ ನಾವು ಸಾವಯವ ಪದ್ದತಿಯಲ್ಲಿ ಕಬ್ಬು ಬೆಳೆದು ಯಾವುದೇ ರಾಸಾಯನಿಕ ಅಥವಾ ಬಣ್ಣ ಉಪಯೋಗಿಸದೇ ಸಾವಯವ ಕಬ್ಬಿನಿಂದ ಬೆಲ್ಲ ತಯಾರಿಸುತ್ತಿದ್ದೇವೆ. ಬೆಲ್ಲ ತಯಾರಿಸುವುದು ಹಿರಿಯರ ಕಾಲದಿಂದ ಗೊತ್ತಿರುವ ಕಸುಬು. ಸಕ್ಕರೆ ಕಾರ್ಖಾನೆ ಆರಂಭವಾಗುವಕ್ಕಿAತ ಮುಂಚೆ ಒಂದು ಊರಿಗೆ ೫-೬ ಬೆಲ್ಲದ ಮನೆ(ಗಾಣದ ಮನೆ) ಇರುತ್ತಿದ್ದವು. ಆದರೆ ಈಗ ಒಂದು ಇಲ್ಲದಂತಾಗಿದೆ, ಇದ್ದರೂ ಅದು ರಾಸಾಯನಿಕ ಅಥವಾ ಬಣ್ಣ ಉಪಯೋಗಿಸಿ ಬೆಲ್ಲ ತಯಾರಿಸುವ ಗಾಣದ ಮನೆಗಳು. ನಮ್ಮದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ೩೨ ಜನರ ಅವಿಭಕ್ತ ಕುಟುಂಬ. ಹಿರಿಯರಾದ ಶಿವರಾಯ ಯಲಡಗಿ, ಕೃಷಿ ಪಂಡಿತ ಕಲ್ಮೇಶ ಯಲಡಗಿರವರ ಮಾರ್ಗದರ್ಶನದಲ್ಲಿ ಒಕ್ಕಲುತನ ಮಾಡುತ್ತಿರುವ ಕೃಷಿ ಕುಟುಂಬ. ಕಬ್ಬು ಬೇಸಾಯ: ತಳಿಗಳು: ಸಿಓ ೮೬೦೩೨, ೧೦೦೦೧, ೯೧೦೧೦, ಓ ೯೨೦೦೫. ೪.೫ ಅಥವಾ ೫ ಫೀಟ್ ಸಾಲಿನಲ್ಲಿ ಕಬ್ಬು ಲಾವಣಿ ಮಾಡಿ, ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಕಾಂಪೋಸ್ಟ ಗೊಬ್ಬರ, ಜೀವಾಮೃತ, ಘನ ಜೀವಾಮೃತ, ಗೋಕೃಪಾಮೃತ ಬಳಸಿ ಕಬ್ಬು ಬೆಳೆಯುತ್ತೇವೆ....