ಕಾಫಿ ನಾಡಿನ ಪ್ರಕೃತಿ ಸೌಂದರ್ಯದ ಮಡಿಲಲ್ಲಿ....!
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
ಮಲೆನಾಡಿನ ಮಳೆಹಾಡಿನ
ಪಿಸುಮಾತಿನ ಹೊಸತನ ಸವಿದೆನಾ...
ನಾದಬ್ರಹ್ಮ ಹಂಸಲೇಖರ ಪದಗಳಿಗೆ ಸಾಕ್ಷಿ ಚಿಕ್ಕಮಗಳೂರು. ನಾನು ಬೆಂಗಳೂರಿನ ಒಂದು ಸಾಫ್ಟವೇರ್ ಕಂಪನಿ ಸೇರಿಕೊಂಡ ನಂತರ ನನ್ನ Tripನ ಕನಸು ಸಾಕಾರಗೊಂಡದ್ದು 1ವರ್ಷದ ನಂತರ. ಅದು ಕಾಫಿ ನಾಡು ಚಿಕ್ಕಮಗಳೂರಿನ ಪ್ರವಾಸ. ಒಂದು ತಿಂಗಳ ಮುಂಚೆಯೇ ಕೊಡೆಕಿನಾಲ್, ಮೈಸೂರು ಎಂತೆಲ್ಲಾ Plan ಮಾಡಿ, ಕೊನೆಗೆ ಹೋಗಿದ್ದು ಚಿಕ್ಕಮಗಳೂರಿಗೆ. 2ದಿನದ ಮುಂಚೆಯೇ ಚಿಕ್ಕಮಗಳೂರಿನ ಹೆನ್ರಿ ಕಾರ್ನ್ರ್ ಲಾಡ್ಜನ್ನು ಮತ್ತು ವಾಯುಪುತ್ರ ಕ್ಯಾಬ್ಸ್ನಲ್ಲಿ ಟೆಂಪೊ-ಟ್ರಾವೆಲ್ಲರ್ ಬುಕ್ ಮಾಡಿದೆವು.
ಶುಕ್ರವಾರದ ದಿನ ಆಫೀಸ್ ಮುಗಿಸಿಕೊಂಡು ಸಹದ್ಯೋಗಿ ಮಿತ್ರರಾದ ಪುನೀತ್, ನಮ್ರತಾ, ಸ್ನೇಹಾ, ರೂಪೇಶ, ರೈನಾ, ದೀಪ್ತಿ, ಶೃತಿ, ಬೆಲಿಂಡಾರನ್ನ ಒಳಗೊಂಡ ನಮ್ಮ ತಂಡ ರಾತ್ರಿ ಸುಮಾರು 10.30ಗಂ. ಗೆ ಎಲೆಕ್ಟ್ರಾನ್ ಸಿಟಿಯಿಂದ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದೆವು. ರಾತ್ರಿ 11.30 ಸುಮಾರಿಗೆ ಬನಶಂಕರಿಯ ಸಂಧಿಗೊಂಧಿಗಗಳ ಮಧ್ಯೆ ನಮ್ಮ ವಾಹನ ಹಾಯ್ದು ಇನ್ನೊಬ್ಬ ಸ್ನೇಹಿತನಾದ ಅರ್ಜುನನನ್ನು Pickup ಮಾಡಿಕೊಂಡು ಬೆಂಗಳೂರಿನಿಂದ ಹೊರ ಬರುವುದರೊಳಗಾಗಿ ಗಂಟೆ 1 ಆಗಿತ್ತು. ಒಂದು ಒಳ್ಳೆಯ ಕಾರ್ಯ ಯಶಸ್ವಿಯಾಗಲು ವಿಘ್ನಗಳು ಜಾಸ್ತಿ ಎಂಬಂತೆ ರಾತ್ರಿ 2 ಗಂಟೆಗೆ ದಾರಿ ಮಧ್ಯದಲ್ಲಿ ನಮ್ಮ Tempo traveller(TT) ಪಂಕ್ಚರ್ ಆಯಿತು. ಅಲ್ಲಿಯೇ ಡ್ರೈವರ್ ವಾಹನದ ವ್ಹೀಲ್ ಬದಲಾಯಿಸಿ ಹೊರಟು, ಅಲ್ಲಿಂದ ಮುಂದೆ ಬಂದು ಒಂದು ಶಾಪ್ಲ್ಲಿ ಪಂಕ್ಚರ್ ಹಾಕಿಸಿ ಚಿಕ್ಕಮಗಳೂರು ತಲುಪುವಷ್ಟರಲ್ಲಿ ಬೆಳಿಗ್ಗೆ 5.30 . ಮೊದಲೇ ಬುಕ್ ಮಾಡಿದ Henry Corner Lodgeನಲ್ಲಿ ಫ್ರೇಶ್ ಆಗಿ, ಟೌನ್ ಕ್ಯಾಂಟೀನ್ನಲ್ಲಿ ಬೆಳಗಿನ ಉಪಹಾರ ಮುಗಿಸಿ ಮುಳ್ಳಯ್ಯನಗಿರಿಯತ್ತ ಹೊರಟೆವು.
ಶನಿವಾರದ ದಿನ ಚಿಕ್ಕಮಗಳೂರಿನಿಂದ ಹೊರಟ ನಾವು, ಕರ್ನಾಟಕದ ಅತ್ಯಂತ ಎತ್ತರದ ಶಿಖರ(ತುದಿ) ಮುಳ್ಳಯ್ಯನಗಿರಿ ತಲುಪಿದೆವು. ಅಲ್ಲಿ ಸಮಯ 11ಗಂಟೆಯಾದರೂ ಮಂಜಿನ ಹನಿಗಳು ನಮ್ಮನ್ನು ಆಮಂತ್ರಿಸುವಂತ್ತಿತ್ತು. ಮಂಜಿನ ಆಮಂತ್ರಣಕ್ಕೆ ತುಂತುರು ಮಳೆಯ ಹನಿಯು ಸಾಥ್ ಕೊಟ್ಟಿತು. ಮುಳ್ಳಯ್ಯನಗಿರಿಯಲ್ಲಿ ಎಲ್ಲಿ ನೋಡಿದರಲ್ಲಿ ಕಾಣುತ್ತಿದ್ದ ದಟ್ಟವಾದ ಮಂಜು ಮನಸ್ಸಿಗೆ ಹಿತ ನೀಡಿತು. ಬೆಂಗಳೂರಿನಂತ ಸಿಲಿಕಾನ್ ಸಿಟಿಯ ಯಾಂತ್ರಿಕ ಜೀವನಕ್ಕೆ, ಕಲುಷಿತವಾದ ಹವಾಮಾನಕ್ಕೆ ಬೇಸತ್ತು ನನ್ನ ಎಲ್ಲಾ ಸ್ನೇಹಿತ ಬಳಗ ಪ್ರಕೃತಿ ಮಡಿಲಲ್ಲಿ ಪರಿಶುದ್ಧವಾದ ಗಾಳಿ ಸೇವಿಸಿ ರಿಲ್ಯಾಕ್ಸ ಆದರು.
ಮುಳ್ಳಯ್ಯನಗಿರಿಯ ಸೌಂದರ್ಯ ಸವಿದು ಮುಂದೆ ಬಾಬಾ ಬುಡನಗಿರಿಯತ್ತ ಪ್ರಯಾಣ ಬೆಳೆಸಿದೆವು. ಹಾವಿನಂತೆ ಹರಿದು ಹೋಗಿದ್ದ ರಸ್ತೆಯಲ್ಲಿ, ನಿಧಾನವಾಗಿ ಸಾಗುತ್ತಾ, ದತ್ತ ಪೀಠ ಎಂದು ಕರೆಯುವ ಬಾಬಾಬುಡನಗಿರಿ ತಲುಪಿದೆವು. ಚಿಕ್ಕಮಗಳೂರಿನಿಂದ 28 ಕಿ. ಮೀ ದೂರವಿರುವ ಈ ಕ್ಷೇತ್ರ ಹಿಂದೂ ಮತ್ತು ಮುಸ್ಲಿಂರ ಪವಿತ್ರ ಕ್ಷೇತ್ರ. ಕಾರಣ ಈ ಪುಣ್ಯಸ್ಥಳವನ್ನು ಹಿಂದೂ ದೇವರು ಗುರು ದತ್ತಾತ್ರೇಯ, ಮುಸ್ಲಿಂ ಸಂತ ಬಾಬಾ ಬುಡನ್ರ ಹೆಸರಿನಿಂದ ಕರೆಯುತ್ತಾರೆ. ಇಲ್ಲಿ 3 ಸಿದ್ಧರ ಪವಿತ್ರ ಗುಹೆಗಳ ದರ್ಶನ ಪಡೆದು, ಮಾಣಿಕ್ಯಧಾರ ಜಲಫಾತ ನೋಡಬೇಕೆಂದು ಇಚ್ಛಿಸಿದೆವು. ಆದರೆ ನಮ್ಮ ಆಸೆಗೆ ಅಲ್ಲಿನ ಮಳೆಗೆ ಕೆಸರಾದ ರಸ್ತೆ ಮಣ್ಣೆರೆಚಿತು. ಆಗಲೇ ಸಮಯ ಮಧ್ಯಾಹ್ನ 2ಗಂಟೆಯಾದರೂ Tripನ ಗುಂಗಿನಲ್ಲಿದ್ದ ನಮ್ಮ 10 ಜನರ ತಂಡ, ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಊಟದ ನೆನಪೇ ಆಗಿರಲಿಲ್ಲ ಅನಿಸುತ್ತೆ.
ಬಾಬಾಬುಡನಗಿರಿಯಿಂದ ನೇರವಾಗಿ ಝರಿ ವಾಟರ್ ಫಾಲ್ಸ್ ಅಥವಾ ದಭೆ ದಭೆ ಫಾಲ್ಸ ಎಂದು ಕರೆಯುವ Butter milk water fallsನತ್ತ ಪ್ರಯಾಣ ಮುಂದುವರೆಸಿದೆವು. ಆದರೆ ಆ ಫಾಲ್ಸಗೆ ಹೋಗಬೇಕೆಂದರೆ Private Jeepನ ಅವಶ್ಯವಿತ್ತು. ಅಲ್ಲಿಯೇ 10 ಜನರಿಗಾಗಿ 2Jeep ಬುಕ್ ಮಾಡಿ, ಹೊರಟಾಗ ಆ ರಸ್ತೆಯ ಪ್ರಯಾಣ ಮೈ ಜುಂ ಎನಿಸುವಂತಿತ್ತು. ಕಲ್ಲು ಕೆಸರಿನಿಂದ ಕೂಡಿದ ಆ ರಸ್ತೆಯ ಎರಡೂ ಕಡೆ ಆಳವಾದ ಪ್ರಪಾತಗಳಿದ್ದವು, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಅನೇಕ ತೆಗ್ಗು-ಗುಂಡಿಗಳಿಂದ ಕೂಡಿದ ಆ ರಸ್ತೆಯಲ್ಲಿ ಹಾಯ್ದು ಹೋದ ವಾಹನ ಕಡೆಗೂ ನಮ್ಮನ್ನು ಝರಿ ಫಾಲ್ಸ್ಗೆ ತಲುಪಿಸಿತು. ಈ Jeepನ ಜರ್ನಿ ಒಂದು ಹೊಸ ಅನುಭವ ನೀಡಿತು ಜೊತೆಗೆ ಖುಷಿ ಕೊಟ್ಟಿತು. ಈ ಝರಿ ಫಾಲ್ಸ್ನಲ್ಲಿ ಮೇಲಮೇಲಿ ಬೀಳುವ ನೀರು, ಆಗಸದಿಂದಲೇ ಬೀಳುತ್ತಿದೆ ಎಂದ ಅನುಭವ. ಅತ್ಯಂತ ತಂಪಾದ ನೀರಿನಲ್ಲಿ ನೆನೆದು, ಖುಷಿಪಟ್ಟು ಹೊರ ಬಂದಾಗ ವರ್ಷಧಾರೆ ಮತ್ತಷ್ಟು ನಮ್ಮನ್ನು ಒದ್ದೆಯಾಗಿಸಿತು. ನಿಸರ್ಗದಲ್ಲಿ ಈ ಎಲ್ಲ ಸಂತೋಷದ ಕ್ಷಣಗಳನ್ನು ಮುಗಿಸಿ ಮತ್ತೆ ಅದೇ Jeep ಮೂಲಕ ಮರಳಿ ಬಂದು, ಮುಂದೆ ನಮ್ಮ traveller ಮೂಲಕ ಲಾಡ್ಜ ತಲುಪಿದೆವು.
ಮಧ್ಯಾಹ್ನ ಊಟದ ಸಮಯ ಮೀರಿದ್ದರಿಂದ ಎಲ್ಲರೂ ಸಂಜೆಯ Snacksಗೆ ಮೊರೆಹೋದೆವು. ಸಾಯಂಕಾಲ ಮತ್ತೆ ಚಿಕ್ಕಮಗಳೂರಿನಿಂದ 14 ಕಿ. ಮೀ ದೂರವಿರುವ ಹಿರೇಕೊಳಲಿ ಕೆರೆ ವಿಕ್ಷಣೆಗೆ ಹೋದೆವು. ಪ್ರಶಾಂತವಾದ ವಾತಾವರಣ ಹೊಂದಿದ ಕೆರೆ, ಮಲೆನಾಡಿನ ಸೌಂದರ್ಯಕ್ಕೆ ತನ್ನದೂ ಕೊಡುಗೆ ನೀಡುತ್ತಿದೆ ಅನಿಸಿತು. ಅಲ್ಲಿಂದ ಮರಳಿ ಮತ್ತೆ Lodgeಗೆ ಮರಳಿ, ಮೊದಲದಿನದ Tripಮುಗಿಸಿ ವಿಶ್ರಾಂತಿಗೆ ಮೊರೆ ಹೋದೆವು.
ರವಿವಾರ ಬೆಳಿಗ್ಗೆ 9 ಗಂ. ಗೆ ಮತ್ತೆ ಅದೇ ಚಿಕ್ಕಮಗಳೂರಿನ ಟೌನ್ ಕ್ಯಾಂಟೀನ್ನಲ್ಲಿ ಬೆಳಗಿನ ಉಪಹಾರ ಮುಗಿಸಿ ಕೆಮ್ಮನಗುಂಡಿ ತಲುಪಿದೆವು. ಕೆಮ್ಮನಗುಂಡಿಯ ಝೀ-ಪಾಯಿಂಟ್ (Z-Point) ನೋಡಬೇಕೆಂದು Trekking ಹೊರಟೆವು. ಪ್ರಕೃತಿ ಸೊಬಗಿನ ಹಚ್ಚ ಹಸಿರಿನ ಚಿಕ್ಕದಾದ ಕಣಿವೆ ದಾರಿಯಲ್ಲಿ, ಕಲ್ಲು ಮಣ್ಣಿನ ಆ ಪಾದಚಾರಿ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಮನಸ್ಸಿಗೆ ಖುಷಿ ನೀಡಿತು. ಹಾಗೆಯೇ ಎತ್ತರೆತ್ತರಕ್ಕೆ ಬೆಟ್ಟ ಹತ್ತುತ್ತಾ ಹೋದಂತೆ ತಂಪಾದ ಗಾಳಿ ನಮ್ಮನ್ನು ಮತ್ತಷ್ಟು ಮೇಲಕ್ಕೆ ಹತ್ತುವಂತೆ ಪ್ರೇರೆಪಿಸುತ್ತಿತ್ತು. ಆ Z-Pointನ ತುದಿ ಮುಟ್ಟಿದಾಕ್ಷಣ ಅಲ್ಲಿ ಆಕಾಶದ ಮೋಡಗಳು ಇನ್ನೇನು ಕೈಗೆ ಸಿಗುತ್ತವೆ ಎಂಬ ಭಾವ ನಮ್ಮೆಲ್ಲರಲ್ಲಿ ಮೂಡಿತ್ತು. ಅಲ್ಲಿಂದ ಬೆಂಗಳೂರಿಗೆ ಹಿಂದಿರುಗಬೇಕೆಂದು ಒಲ್ಲದ ಮನಸ್ಸಿನಿಂದ ಬೇಗನೇ Z-Pointದಿಂದ ಹಿಂದಿರುಗಬೇಕಾಯಿತು. ಅಲ್ಲಿಂದ ಮುಂದೆ ಕಲ್ಲತಗಿರಿಯ ಫಾಲ್ಸ್ ವಿಕ್ಷೀಸಿ, ಶ್ರೀ ವೀರಭದ್ರ ದೇವರ ದರ್ಶನ ಪಡೆದು ಮತ್ತೆ ನೇರವಾಗಿ ತರಿಕೇರೆಗೆ ಆಗಮಿಸಿ ಅಲ್ಲಿ ಗ್ರ್ಯಾಂಡ್ ಶ್ವೇತಾ ಹೋಟೆಲ್ನಲ್ಲಿ ಮಧ್ಯಾಹ್ನದ ಊಟ ಮಾಡಿ, ಎಲ್ಲರೂ Traveller ಏರಿದೆವು.


ಬೆಂಗಳೂರಿಗೆ ಹಿಂದಿರುವಾಗ ದಾರಿಯ ಮಧ್ಯದಲ್ಲಿ ಮೊದಲೇ ನಿಶ್ಚಯಿಸಿದಂತೆ ಅಮೃತೇಶ್ವರ ದೇವಾಲಯ ವಿಕ್ಷೀಸಿ ದೇವರ ದರ್ಶನ ಪಡೆದೆವು. ಈ ಪುಣ್ಯಸ್ಥಳ ಹೊಯ್ಸಳ ರಾಜ ವೀರ ಬಲ್ಲಾಳನ ಆಳ್ವಿಕೆಯಲ್ಲಿ 1196ರಲ್ಲಿ ನಿರ್ಮಿಸಿದ ದೇವಾಲಯ. ಈ ದೇವಾಲಯಕ್ಕೆ ವಾಸ್ತುಶಿಲ್ಪಿ ಅಮೃತೇಶ್ವರ ದಂಡನಾಯಕನ ನೆನಪಿನಲ್ಲಿ ಇದನ್ನು ಹೆಸರಿಸಲಾಗಿದೆ. ಈ ದೇವಾಲಯದ ಕೆತ್ತನೆ ಎಲ್ಲರನ್ನೂ ಬೆರಗುಗೊಳಿಸಿದ್ದಲ್ಲದೇ ಅಲ್ಲಿಯ ಸ್ವಚ್ಛತೆ-ಸಂಸ್ಕøತಿ ಎಲ್ಲರೂ ಕಲಿಯಬೇಕೆನಿಸಿತು. ಈ ಅಮೃತಪುರದ ಅಮೃತೇಶ್ವರ ನಮ್ಮ Tripನ ಕೊನೆಯ ಸ್ಥಳವಾಗಿತ್ತು.
2 ದಿನದ Tripಮುಗಿಯಿತು ಎಂಬ ನಿರಾಸೆ ಎಲ್ಲರ ಮನದಲ್ಲೂ ಮನೆಮಾಡಿತ್ತು. ಯಾರಿಗೂ ಚಿಕ್ಕಮಗಳೂರನ್ನು ಬಿಟ್ಟು ಸಿಲಿಕಾನ್ ಸಿಟಿಗೆ ಹೋಗುವ ಮನಸ್ಸಿರಲಲ್ಲ. ಆದರೂ ಒಲ್ಲದ ಮನಸ್ಸಿನಿಂದ ಯಾಂತ್ರಿಕ ಲೋಕ ಬೆಂಗಳೂರಿಗೆ ತುಮಕೂರಿನ ಮೂಲಕ ರಾತ್ರಿ 12 ಗಂ. ಗೆ ತಲಪಿದೆವು. 2ದಿನ, CCP, BTR, deployment, testing, defectಎಂಬ ಲೋಕದಿಂದ ದೂರವಿದ್ದ ನಾವುಗಳೆಲ್ಲಾ ಮತ್ತೆ ಸೋಮವಾರ officeಗೆ ಹೋಗವುದು ಅನಿವಾರ್ಯವಾಗಿತ್ತು. ನಮ್ಮ 2ದಿನದ tripನ್ನು ಸುರಕ್ಷಿತವಾಗಿ ಮುಗಿಸಿದ ಡ್ರೈವರ್ ಮುನಿರಾಜುರವರಿಗೆ ಧನ್ಯವಾದ. ಮತ್ತೊಮ್ಮೆ ಇದೇ ತರಹ ಇನ್ನೊಮ್ಮೆ tripಆಗಲಿ ಎಂದು ಆಶಿಸುತ್ತಾ....
ಚೇತನ ಶಿ. ಯಲಡಗಿ




ನಮ್ಮ ಜೊತೆ ನೂ ಬಾರಪ್ಪ ಪ್ರ ವಾಸಕ್ಕೆ
ReplyDeleteTrip plan madri dost... Nan ready
DeleteBit hodiyallo nammana
ReplyDelete