“ಸುಂದರ ಗ್ರಾಮ ಶೇಗುಣಸಿ”
“ಸುಂದರ ಗ್ರಾಮ ಶೇಗುಣಸಿ”
SHEGUNASHI
|| Chetan Yaladagi
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಗಡಿಭಾಗದ ಒಂದು ಪುಟ್ಟ, ಸುಂದರ ಗ್ರಾಮ ಶೇಗುಣಸಿ. ಈ ಊರಿನ ಒಂದು ದಿಕ್ಕಿಗೆ ರಾಯಭಾಗ ಇನ್ನೊಂದು ದಿಕ್ಕಿಗೆ ಜಮಖಂಡಿ ತಾಲೂಕು ಹರಡಿಕೊಂಡಿವೆ. ಇಲ್ಲಿ ಮುಗ್ಧ ಮನಸ್ಸಿನ, ಪ್ರೀತಿ, ಮಮತೆ ತೋರಿಸುವ ಸುಸಂಕೃತ ಜನರಿದ್ದಾರೆ.
ಶೇಗುಣಸಿ ಎಂಬ ಪುಟ್ಟ ಗ್ರಾಮ ಯಾವ ಕ್ಷೇತ್ರದಲ್ಲಿಯೂ ಹಿಂದೆ ಇಲ್ಲ. ಅದು ಎಲ್ಲ ಕ್ಷೇತ್ರದಲ್ಲಿಯೂ ಎಲೆ ಮರೆಯ ಕಾಯಿಯಂತೆ ತನ್ನನ್ನು ತಾ ತೊಡಗಿಸಿಕೊಂಡಿದೆ. ಈ ಗ್ರಾಮ ಆಧ್ಯಾತ್ಮ, ಶಿಕ್ಷಣ, ಕ್ರೀಡೆ, ರಾಜಕೀಯ, ಕೃಷಿ, ವ್ಯವಹಾರ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ತಾಲೂಕಿನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
ಆಧ್ಯಾತ್ಮದ ವಿಷಯವೆಂದರೆ ಶೇಗುಣಸಿಯಲ್ಲಿ ಇಂಚಗೇರಿ ಸಾಂಪ್ರದಾಯದ ಶಾಖಾಮಠವಾದ ಶ್ರೀ ಸದ್ಗುರು ಸಮರ್ಥ ಕಲ್ಮೇಶ್ವರ ಮಹಾರಾಜರ ಆಧ್ಯಾತ್ಮ ಆಶ್ರಮವಿದೆ ಮತ್ತು ಈ ಭಾಗದಲ್ಲಿ ಕಾಲ್ನಡಿಗೆ ಮೂಲಕ ಆಧ್ಯಾತ್ಮ ಭೋಧಿಸಿದ ಶ್ರೀ ಸದ್ಗುರು ಸಮರ್ಥ ಕಲ್ಮೇಶ್ವರ ಮಹಾರಾಜರ ಜನ್ಮಸ್ಥಳವೂ ಶೇಗುಣಸಿಯೇ ಆಗಿದೆ ಅಲ್ಲದೇ ಇಂಚಗೇರಿ ಸಾಂಪ್ರದಾಯದ ಆದಿಪುರುಷ ಅಥವಾ ಸಾಂಪ್ರದಾಯದ ಆರಂಭಿಕ ಎನಿಸಿರುವ ಶ್ರೀ ಸಮರ್ಥ ಸದ್ಗುರು ಶ್ರೀ ಕಾಡಸಿದ್ದೇಶ್ವರ ಮಹಾರಾಜರ ಜನ್ಮಸ್ಥಳ ಶೇಗುಣಸಿ ಎಂದು ಸಿದ್ದಯ್ಯ ಪುರಾಣಿಕರ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ. ಶ್ರೀ ಮುರುಘೇಂದ್ರ ಮಹಾಸ್ವಾಮಿಗಳ ವಿರಕ್ತಮಠ, ಬಸವ-ದಳ, ಸಿದ್ದಾರೂಢ ಮಠ ಹೀಗೆ ಅನೇಕ ಮಠ-ಮಂದಿರಗಳು ಇದ್ದು,ಇವು ಜ್ಞಾನದಾಸೋಹ ಮತ್ತು ಅನ್ನದಾಸೋಹ ಸಹ ಮಾಡುತ್ತಿವೆ. ಕರ್ನಾಟಕ ರಾಜ್ಯದಲ್ಲೇ, ಶೇಗುಣಸಿಯ ಮಲ್ಲಿಕಾರ್ಜುನ ದೇವರ ಫಾಲ್ಕೆ(ಕಂಬಿ) ಮಾತ್ರ ಶ್ರೀಶೈಲ ಪುರದ ಮಲ್ಲಿಕಾರ್ಜುನ ದೇವಸ್ಥಾನದ ಗರ್ಭಗುಡಿ ಪ್ರವೇಶಿಸುವದು ರೂಢಿಯಲ್ಲಿದೆ. ವರ್ಷಕ್ಕೆರಡು ಬಾರಿ ಊರಿನಲ್ಲಿ ವಿಜೃಂಭನೆಯ ಜಾತ್ರಾ ಮಹೋತ್ಸವ ನೆರವೇರುತ್ತದೆ. ಇನ್ನು ಮಠಗಳಲ್ಲದೇ ಕೆಲವು ಜನ ತಮ್ಮ ತೋಟದಲ್ಲಿಯೇ ಕನಿಷ್ಠ ವರ್ಷಕ್ಕೊಂದು ಬಾರಿ ಜ್ಞಾನಯಜ್ಞ ಸಪ್ತಾಹ ಏರ್ಪಡಿಸಿ ಅವರೂ ಸಹ ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹ ಮಾಡುತ್ತಾರೆ. ಅವರಲ್ಲಿ ಪ್ರಮುಖರೆಂದರೆ ಶ್ರೀ ಶಿವರಾಯಿ ಯಲಡಗಿ, ಶ್ರೀ ಶ್ರೀಶೈಲ ನಾರಗೊಂಡ ಎಂದು ಹೇಳಬಹುದು.
ಶೇಗುಣಸಿಯಲ್ಲಿ ಶಿಕ್ಷಣ ನೀಡುವುದಗೊಸ್ಕರ ಶ್ರೀ ಮುರುಘೇಂದ್ರ ಶಿಕ್ಷಣ ಸಂಸ್ಥೆ, ಸರಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆ ಇದೆ. ಇಲ್ಲಿ ಕಲಿತ ಅನೇಕರು ಇಂದು ಸಿಂಗಾಪುರ, ಲಂಡನ್, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಇಲ್ಲಿಯ ಸರಕಾರಿ ಫ್ರೌಢ ಶಾಲಾ ವಿದ್ಯಾರ್ಥಿಗಳು ಕಳೆದ ವರ್ಷ ಕಬ್ಬಡ್ಡಿ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು ಎಂಬುದನ್ನು ನೆನೆದರೆ ಖುಷಿ ಎನಿಸುತ್ತದೆ.
ಶೇಗುಣಸಿಯಲ್ಲಿ ಕೃಷಿಯೇ ಜನರ ಪ್ರಮುಖ ಕಸುಬು. ಕಬ್ಬು ಇಲ್ಲಿನ ಪ್ರಮುಖ ಬೆಳೆ ಆದ್ದರಿಂದಲೇ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸಕ್ಕರೆ ಕಾರ್ಖಾನೆಗಳು ಅಥಣಿ ತಾಲೂಕಿನಲ್ಲಿವೆ. ತಾಲೂಕಿನಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯುವ ಗ್ರಾಮ ಶೇಗುಣಸಿ. ಇಲ್ಲಿಯ ರೈತ ಈಗ ಸಾವಯವ ಕೃಷಿಯತ್ತ ಮುಖ ಮಾಡಿದ್ದಾನೆ ಆದ್ದರಿಂದಲೇ 2011 ಎಪ್ರೀಲ್ 30ರಂದು ಡಾ.ಆನಂದ ಶ್ರೀ ಹಾಗೂ ಶ್ರೀ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಶೇಗುಣಸಿಯ ಶ್ರೀ ಯಲಡಗಿ ಹಾಗೂ ಭದ್ರಪ್ಪಗೋಳ ಬಂಧುಗಳ ಮನೆಗೆ ಆಗಿನ ಮುಖ್ಯಮಂತ್ರಿ ಡಾ.ಬಿ ಎಸ್ ಯಡಿಯೂರಪ್ಪ ಹಾಗೂ ಅನೇಕ ಸಚಿವರುಗಳು ಆಗಮಿಸಿದ್ದರು.ಆಗ ಡಾ.ಬಿ ಎಸ್ ಯಡಿಯೂರಪ್ಪನವರು, "ಶ್ರೀ ಯಲಡಗಿ ಹಾಗೂ ಭದ್ರಪ್ಪಗೋಳ ಬಂಧುಗಳ ಮನೆ ಒಂದು ಕೃಷಿ ವಿಶ್ವವಿದ್ಯಾಲಯದಂತಿದೆ" ಎಂದು ಹೇಳಿರುವುದನ್ನು ನೆನೆದರೆ ಹೆಮ್ಮೆ ಎನಿಸುತ್ತದೆ. ಈ ಸಾವಯವ ಕೃಷಿಕನ ಸಾಧನೆಯನ್ನು ನೋಡಲು ರಾಜ್ಯದ ಮೂಲೆ-ಮೂಲೆಯಿಂದ ರೈತಾಸಕ್ತರು, ಅನೇಕ ಕುಲಪತಿಗಳು, ಮಠಾಧೀಶರು ಆಗಮಿಸಿದ್ದಾರೆ .ರಾಜ್ಯ ಸರ್ಕಾರ ಕೊಡಮಾಡುವ "ಕೃಷಿ ಪಂಡಿತ ಪ್ರಶಸ್ತಿ"ಯನ್ನು ಅಥಣಿ ತಲೂಕಿನಲ್ಲಿ ಶೇಗುಣಸಿಯವರೇ ಅತೀ ಹೆಚ್ಚು ರೈತರು ಪ್ರಶಸ್ತಿ ಪಡೆದಿದ್ದಾರೆ. ಅವರೆಂದರೆ ಶ್ರೀ ಕಲ್ಮೇಶ ಯಲಡಗಿ, ಶ್ರೀ ಬಸವರಾಜ ತೇಲಿ, ಶ್ರೀ ಬುಜಪ್ಪ ಹಳ್ಳೂರ ಎಂದು ಹೇಳಬಹುದು. ಹಿಪ್ಪರಗಿ ಆಣೆಕಟ್ಟಿನ ಹಿನ್ನೀರಿನಿಂದ ಬಂಗಾರ ಬೆಳೆಯುವ ಕಪ್ಪು ಭೂಮಿ ಇಂದು ಜವಳಾಗಿದೆ ಆದರೆ ಪರಿಶ್ರಮ ಬಿಡದ ರೈತರು ಜವಳನ್ನು ಸವಳಿನ ರೂಪದಲ್ಲಿ ಹೊರ ತೆಗೆಯುವ ಪೈಪನ್ನು ಭೂಮಿಯಲ್ಲಿ ಅಳವಡಿಸಿ ಅದರಲ್ಲಿಯೂ ಸಹ ಯಶಸ್ವಿಯಾಗಿದ್ದಾರೆ.
ಶೇಗುಣಸಿಯಲ್ಲಿ ಇಂದು ಅನೇಕ ಸಹಕಾರಿ ಬ್ಯಾಂಕುಗಳಿವೆ ಮತ್ತು ಶೇಗುಣಸಿಯವರೇ ಆದ ಶ್ರೀ ಅಶೋಕ ಅವಕ್ಕನವರರವರು ಬೆಳಗಾವಿ ಜಿಲ್ಲಾ ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರು ಇದ್ದಾರೆ.ಶೇಗುಣಸಿಯ ರಾಜಕೀಯ ಎಂದರೆ ಇಲ್ಲಿ 16 ಸದಸ್ಯರನ್ನೊಳಗೊಂಡ ಗ್ರಾಮ ಪಂಚಾಯತಿ ಇದೆ. ಸತ್ತಿಯೊಂದಿಗೆ ಜಿಲ್ಲಾ ಪಂಚಾಯತಿ ಹಂಚಿಕೊಂಡಿದೆ. ಅಥಣಿ ವಿಧಾನಸಭೆ ವ್ಯಾಪ್ತಿ ಶೇಗುಣಸಿವರೆಗೆ ಹರಡಿಕೊಂಡಿದೆ. ಈಗಿನ ಶಾಸಕರು ಸನ್ಮಾನ್ಯ ಶ್ರಿ ಮಹೇಶ ಕುಮಟಳ್ಳಿ.
ಶೇಗುಣಸಿಯ ಸೌಭಾಗ್ಯವೆಂದರೆ ಇಂದಿನವರೆಗೂ ಊರಿಗೆ ಪೋಲಿಸರು ನ್ಯಾಯ ಬಗೆಹರಿಸಲು ಬಂದಿಲ್ಲ ಹಾಗೂ ಇಲ್ಲಿಯ ಜನ ಸಹಿತ ಕೋರ್ಟ್, ಪೊಲೀಸ ಸ್ಟೇಶನ್ ಎಂದು ಅಲೆದಾಡಿಲ್ಲ, ಬದಲಾಗಿ ಈ ಊರಿನ ನ್ಯಾಯವನ್ನು ಇಲ್ಲಿನ ಹಿರಿಯರೇ ಮುಂದೆ ನಿಂತು ಬಗೆಹರಿಸುವ ಅದ್ಭುತ ವಾಡಿಕೆ ಇಂದಿನವರೆಗೂ ಇದೆ.
ಶೇಗುಣಸಿಯ ಬಗ್ಗೆ ಸ್ವ-ರಚಿತ ಕವನ.
ನನ್ನ ಊರು
ನಾ ಕಂಡ ನನ್ನೂರು
ಪ್ರೀತಿ ಮಮತೆಯ ತವರೂರು
ಅಲ್ಲಿ ಹರಿದಿದೆ ಕೃಷ್ಣಾ ನದಿ
ಅದುವೇ ಎಲ್ಲ ಕೃಷಿಕರಿಗೆ ಹಾದಿ
ಅನೇಕ ಮಹಾತ್ಮರ ಜನ್ಮಸ್ಥಳ
ಅದು ಎಲ್ಲ ಜನರ ಪುಣ್ಯಸ್ಥಳ
ಕದಂಬರ ರಾಜಧಾನಿ ಬನವಾಸಿ
ನನ್ನೂರ ಹೆಸರು ಶೇಗುಣಸಿ.
ಮೊ:9686856416
ಲೇಖನ ಇಷ್ಟವಾದರೆ ಶೇರ್ ಮಾಡಿ..
ಲೇಖನ ಇಷ್ಟವಾದರೆ ಶೇರ್ ಮಾಡಿ..




Comments
Post a Comment