ಇಂದು ವಿಧಾನಸಭೆಯಲ್ಲಿ ಮತ್ತೆ ಗುಡುಗಿ ಮೈತ್ರಿ ಸರ್ಕಾರದ ಚಳಿ ಬಿಡಿಸಿದ ಬಿ.ಎಸ್.ಯಡಿಯೂರಪ್ಪ..

ಜೈ ಶೇಗುಣಸಿ ಸುದ್ದಿ...


ಸದ್ಯ ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದೆ. ನೆನ್ನೆ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸುದೀರ್ಘವಾದ ಭಾಷಣವನ್ನು ಮಾಡಿದ್ದರು. ಇಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಸದನ ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರದ ಅತ್ಯಂತ ಮಹತ್ವದ ಬಜೆಟ್ ಅಧಿವೇಶನ ಇದಾಗಿದ್ದು ರಾಜ್ಯದ ಜನರ ಗಮನ ಸೆಳೆದಿದೆ. ಸಾಲಮನ್ನಾ ಸೇರಿದಂತೆ ಹಲವಾರು ಮಹತ್ವದ ನಿರ್ಧಾರಗಳು ಈ ಅಧಿವೇಶನದಲ್ಲಿ ಹೊರಬೀಳುವ ನಿರೀಕ್ಷಿಯಿದೆ‌.
ಇಂದು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಹಲವಾರು ವಿಷಯಗಳ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು. ವಿಧಾನಸಭೆಯ ವಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪನವರು ಅಕ್ಷರಶಃ ಮೈತ್ರಿ ಸರ್ಕಾರವನ್ನು ಇಂಚಿಂಚೂ ಕಾಡಿದರು. ಕಟು ಶಬ್ದಗಳಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದರು. ತಾವು ಪ್ರಣಾಳಿಕೆಯಲ್ಲಿ ಕೊಟ್ಟಂತಹ ಮಾತುಗಳನ್ನು, ಭರವಸೆಗಳನ್ನು ಮತ್ತೊಮ್ಮೆ ನೆನಪಿಸಿದರು. ಈ ವಾರ ಮಂಡನೆಯಾಗಲಿರುವ ಬಜೆಟ್ ನಲ್ಲಿ ಭರವಸೆಗಳನ್ನು ಈಡೇರಿಸುವ ಕುರಿತು ಮಾತನಾಡದಿದ್ದರೆ ರಾಜ್ಯಾದ್ಯಂತ ಸಮಾವೇಶಗಳನ್ನು ಹಮ್ಮಿಕೊಳ್ಳುವುದಾಗಿ ಘೋಷಿಸಿದರು.
ತಾವು ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದರೆ ನಾನೇ ಮುಂದೆ ನಿಂತು ನಿಮಗೆ ಜೈಕಾರ ಹೇಳುತ್ತೇನೆ. ಅದರ ಬದಲಾಗಿ ಜನತೆಗೆ ದ್ರೋಹ ಎಸಗಿದರೆ ‘ಹೇಳಿದ್ದೇನು ಮಾಡಿದ್ದೇನು’ ಎಂಬ ಹೆಸರಿನಲ್ಲಿ ರಾಜ್ಯದ ಮೂಲೆ ಮೂಲೆಗೆ ಸಂಚರಿಸಿ ಜನರಿಗೆ ವರದಿ ನೀಡುತ್ತೇನೆ ಎಂದು ಗುಡುಗಿದರು. ಜೊತೆಗೆ ಬಕೆಟ್ ಅನ್ನು ಮಂಡಿಸುವ ಮುನ್ನ ರಾಜ್ಯದ ಆರ್ಥಿಕ ಸ್ಥಿತಿಗತಿಯ ಕುರಿತು ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದರು. ಈಗಾಗಲೇ ವರದಿಗಳ ಪ್ರಕಾರ ರಾಜ್ಯ ಸರ್ಕಾರ 2.48 ಲಕ್ಷ ಕೋಟಿಯಷ್ಟು ಸಾಲದಲ್ಲಿದೆ. ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕೊನೆಯ ದಿನಗಳಲ್ಲಿ ಹತ್ತು ಸಾವಿರ ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ತುರ್ತಾಗಿ ಚಾಲನೆ ನೀಡಿದ್ದಾರೆ. ಅವುಗಳಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ.ಅವುಗಳ ಭವಿಷ್ಯವೇನು? ಆ ಕಾಮಗಾರಿಗಳಿಗೆ ಎಲ್ಲಿಂದ ಹಣವನ್ನು ತರುತ್ತೀರಿ? ಸಾಲ ಮನ್ನಾಕ್ಕೆ ಹಣವನ್ನು ಹೇಗೆ ಹೊಂದಿಸುತ್ತೀರಿ? ಈ ಎಲ್ಲದರ ಕುರಿತು ರಾಜ್ಯದ ಆರ್ಥಿಕತೆಯ ಶ್ವೇತ ಪತ್ರವನ್ನು ಹೊರಡಿಸಿ ಆನಂತರ ಬಜೆಟ್ ನ್ನು ಮಂಡಿಸಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಆಗ್ರಹಿಸಿದರು.
ಇನ್ನು ನಿನ್ನೆಯ ರಾಜ್ಯಪಾಲರಿಂದ ಭಾಷಣದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ ಎಂದು ಹೇಳಿಸಿದ್ದೀರಿ. ಆದರೆ ಇತ್ತೀಚೆಗೆ ಬಂದಿರುವ ವರದಿಯ ಪ್ರಕಾರ ದೇಶದಲ್ಲಿಯೇ ಬೆಂಗಳೂರು ಕ್ರೈಂ ಅತಿ ಹೆಚ್ಚಾಗಿರುವ ಎರಡನೇ ನಗರ ಎಂಬ ಕುಖ್ಯಾತಿಗೆ ಒಳಗಾಗಿದೆ. ಇನ್ನು ಕೃಷಿಗೆ ನಮ್ಮ ಸರ್ಕಾರ ಪ್ರಾಧಾನ್ಯತೆ ನೀಡಿದೆ ಎಂದಿದ್ದೀರಿ. ಆದರೆ ಕಳೆದ ಐದು ವರ್ಷಗಳಲ್ಲಿ ನಾಲ್ಕೂವರೆ ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನೆನಪಿರಲಿ ಎಂದು ಸರ್ಕಾರವನ್ನು ಎಚ್ಚರಿಸಿದರು.
ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರವನ್ನು ಅಪವಿತ್ರ ಮೈತ್ರಿ ಎಂದು ಕೆರೆದು ಅವರುಗಳು ಚುನಾವಣೆಯ ಮೊದಲು ಹೇಳಿಕೊಂಡಿದ್ದ ಹೇಳಿಕೆಗಳನ್ನು ಮತ್ತೊಮ್ಮೆ ನೆನಪಿಸಿದರು. ಜಾತ್ಯತೀತ ಜನತಾ ದಳವನ್ನು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯ ಬಿ ಟೀಮ್ ಎಂದು ಕರೆದಿದ್ದನ್ನು ಕುಮಾರಸ್ವಾಮಿಯವರಿಗೆ ನೆನಪು ಮಾಡಿಕೊಟ್ಟರು. ಹಾಗೆಯೇ ಕುಮಾರಸ್ವಾಮಿ ಅವರು ಎರಡು ವರ್ಷದ ಹಿಂದೆ ಸಿದ್ದರಾಮಯ್ಯನವರ ಕುರಿತು ಹೇಳಿದಂತಹ ಮಾತುಗಳನ್ನು ಮತ್ತೊಮ್ಮೆ ಪುನರುಚ್ಚರಿಸಿದರು. ಸಿದ್ದರಾಮಯ್ಯನವರು ಸಮಾಜವಾದಿ ಎಂದು ಹೇಳುತ್ತಾರೆ. ಆದರೆ ನಲವತ್ತು ಲಕ್ಷ ಮೌಲ್ಯದ ವಾಚ್ ಧರಿಸುತ್ತಾರೆ. ಸಾವಿರಾರು ರೂಪಾಯಿ ಮೌಲ್ಯದ ಚಪ್ಪಲಿಗಳನ್ನು ಧರಿಸುತ್ತಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಂತಹ ಮಾತುಗಳನ್ನು ಸಿದ್ದರಾಮಯ್ಯನವರಿಗೆ ನೆನಪಿಸಿದರು.
ರಾಜ್ಯದಲ್ಲಿ ಆಡಳಿತ ಯಂತ್ರ ಅಕ್ಷರಶಃ ಸ್ತಬ್ಧವಾಗಿದೆ. ಕೇವಲ 37 ಸೀಟುಗಳನ್ನು ಪಡೆದವರು ಇಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಕೊನೆಯ ಪಕ್ಷ ಕಾಂಗ್ರೆಸ್ಸಿನಿಂದ ಯಾರಾದರೂ ಮುಖ್ಯಮಂತ್ರಿಯಾಗಿದ್ದರೂ ಸ್ವಲ್ಪವಾದರೂ ಸಮಾಧಾನ ಪಟ್ಟುಕೊಳ್ಳಬಹುದಿತ್ತು. ಇದು ಕರ್ನಾಟಕದ ದುಸ್ಥಿತಿ. ರಾಜ್ಯ ಸರ್ಕಾರ ಸಂಪುಟವನ್ನು ವಿಸ್ತರಿಸಲು ಹೆದರುತ್ತಿದೆ. ಎಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಶಾಸಕರುಗಳು ತಿರುಗಿ ಬೀಳುತ್ತಾರೋ ಎಂಬ ಭಯದಿಂದ ಮೈತ್ರಿ ಸರ್ಕಾರ ಕುಂಟುತ್ತಾ ಸಾಗಿದೆ. ಇನ್ನೂ ಟೇಕಾಫ್ ಆಗುವ ಲಕ್ಷಣಗಳೇ ಕಂಡು ಬರುತ್ತಿಲ್ಲ ಎಂದು ಟೀಕಿಸಿದರು.
ಎರಡೂ ಪಕ್ಷದವರಿಗೆ ಅವರು ಶಾಸಕರುಗಳ ಮೇಲೆಯೇ ನಂಬಿಕೆಯಿಲ್ಲ. ಶಾಂತಿವನದಲ್ಲಿ ಕುಳಿತು ಸಿದ್ದರಾಮಯ್ಯನವರು ಏನೇನು ರಣತಂತ್ರ ಹೂಡುತ್ತಿದ್ದರು ಎಂಬುದು ಇಡೀ ರಾಜ್ಯದ ಜನರಿಗೆ ಈಗಾಗಲೇ ಗೊತ್ತಾಗಿದೆ. ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಗಾಗ್ಗೆ ತಾನು ಕಾಂಗ್ರೆಸ್ಸಿನ ಹಂಗಿನಲಗಲಿದ್ದೇನೆ ಎಂದು ಹೇಳುತ್ತಿದ್ದಾರೆ. ಆ ಮೂಲಕ ರಾಜ್ಯದ ಜನರನ್ನು ಅವಮಾನ ಮಾಡುತ್ತಿದ್ದಾರೆ. ಪದೇ ಪದೇ ತಾನು ಸಾಂದರ್ಭಿಕ ಶಿಶು ಎನ್ನುತ್ತಾರೆ. ಸಾಂದರ್ಭಿಕ ಶಿಶುವಿಗೆ ಅಪ್ಪನೂ ಇರುವುದಿಲ್ಲ, ಅಮ್ಮನ್ನು ಇರುವುದಿಲ್ಲ, ನೈಜತೆಯ ಇರುವುದಿಲ್ಲ. ಅದೊಂದು ಅಸಹಜ ಶಿಶು. ಈ ಅಸಹಜ ಶಿಶು ಹೆಚ್ಚು ದಿನ ಬಾಳುವುದಿಲ್ಲ ಎಂದು ವ್ಯಂಗ್ಯವಾಡಿ ಅಕ್ಷರಶಃ ದೋಸ್ತಿ ಸರ್ಕಾರದ ಮೇಲೆ ಮುಗಿಬಿದ್ದರು.
ಕೇವಲ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎನ್ನುವುದು ನಮ್ಮ ಗುರಿ ಎಂದು ಪದೇ ಪದೇ ನೀವುಗಳು ಹೇಳುತ್ತಿದ್ದೀರಿ. ಅದರಂತೆಯೇ ಪರಮೇಶ್ವರ್, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಸೇರಿ ಮೈತ್ರಿ ಸರ್ಕಾರ ರಚಿಸಿದಿರಿ. ಅಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಗಳಿಗೆ ಕಳಂಕವನ್ನುಂಟು ಮಾಡಿ ಸರ್ಕಾರ ರಚಿಸಿದ್ದೀರಿ ಎಂದಾಯಿತಲ್ಲವಾ ಎಂದು ಪ್ರಶ್ನಿಸಿದರು. ರಾಜ್ಯದ ಜನತೆ ಸಾರಾಸಗಟಾಗಿ ತಿರಸ್ಕರಿಸಿದ ನೀವಿಬ್ಬರೂ ಸೇರಿ ಅಪವಿತ್ರ ಮೈತ್ರಿಯನ್ನು ಮಾಡಿಕೊಂಡಿದ್ದೀರಿ. ನೀವುಗಳು ಕೊಟ್ಟಿರುವ ಭರವಸೆಯನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳಿ. ಬಜೆಟ್ ನಲ್ಲಿ ಅವುಗಳನ್ನು ಘೋಷಿಸದಿದ್ದರೆ ರಾಜ್ಯದೆಲ್ಲೆಡೆ ನಿಮ್ಮ ಬಂಡವಾಳವನ್ನು ಬಿಚ್ಚಿಡುತ್ತೇನೆ ಎಂದು ಎಚ್ಚರಿಸಿದರು .

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18