ಮಳೆ ಬಂದಮೇಲೆಯೇ ಎಚ್ಚರವಾಗುತ್ತದಾ ನಿಮಗೆ: ಎಚ್ಡಿಕೆ
ಜೈ ಶೇಗುಣಸಿ ಸುದ್ದಿ..
ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ತರಾಟೆ
ಕೆಲಸಗಳೆಲ್ಲ ಅರ್ಧಕ್ಕೆ ನಿಲ್ಲಲು ಕಾರಣವೇನು? ಪ್ರತಿವರ್ಷ ಮಳೆಬಂದು ನೀರು ನಿಲ್ಲುತ್ತದೆ. ಆಗ ಮಾತ್ರ ನಿಮಗೆ ಎಚ್ಚರ ಆಗುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳೊಂದಿಗೆ ನಡೆಸಿದ ಹಾನಿ ತಡೆ ಸಭೆಯಲ್ಲಿ ಮಾತನಾಡಿ, ನೀರು ನಿಲ್ಲುವ ಜಾಗಗಳು ಗೊತ್ತಿದ್ದರೂ ಅದನ್ನು ಉಳಿದ ದಿನ ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ. ರಾಜಕಾಲುವೆ ನಕ್ಷೆ ಬದಲಾಗಲು ಕಾರಣವೇನು? ಒತ್ತುವರಿ ತೆರವು ಕೈಬಿಟ್ಟಿದ್ದು ಯಾವ ಕಾರಣಕ್ಕೆ. ಕಾರ್ಯಾಚರಣೆ ವೇಳೆ ಶ್ರೀಮಂತರ ಮನೆಗಳು ಬಂದ ತಕ್ಷಣ ಸ್ಥಗಿತಗೊಂಡಿತಾ ಎಂದು ಪ್ರಶ್ನಿಸಿದರು.
ಇನ್ನು ಮುಂದೆ ಇದೆಲ್ಲ ಆಗಬಾರದು. ಮಳೆಗಾಲದಲ್ಲಿ ಎಲ್ಲಿಯೂ ನೀರು ನಿಲ್ಲಬಾರದು. ತಕ್ಷಣ ಕೆಲಸ ಆರಂಭವಾಗಬೇಕು. ಅವೈಜ್ಞಾನಿಕ ಯೋಜನೆ ಬಿಟ್ಟುಬಿಡಿ. ತಲೆಗೆ ಸ್ವಲ್ಪ ಕೆಲಸ ಕೊಡಿ ಎಂದು ಹೇಳಿದರು.
ಸಭೆಯ ನಂತರ ಹೇಳಿಕೆ ನೀಡಿದ ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್, ಮಳೆಯಿಂದಾಗುವ ಹಾನಿಗಳನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದ್ದೇವೆ. 369 ಪ್ರದೇಶಗಳನ್ನು ಬರಪೀಡಿತ ಎಂದು ಗುರುತಿಸಿದ್ದು ಪರಿಹಾರ ನೀಡಲಾಗುವುದು. ಮಳೆ ನೀರು ನುಗ್ಗುವ 389 ಪ್ರದೇಶಗಳನ್ನು ಗುರುತಿಸಲಾಗಿದ್ದು ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿದ್ದೇವೆ ಎಂದರು.
ಜೂ. 6, 7ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಹಾನಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತುರ್ತು ಸಂದರ್ಭಗಳಿಗಾಗಿ ತಂಡಗಳನ್ನು ರಚಿಸಲಾಗಿದೆ. NDRF, SDRF ತಂಡಗಳು ಕೂಡ ಸಿದ್ಧವಾಗಿವೆ. ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಪ್ರಗತಿಯಲ್ಲಿದ್ದು ಹೊಸ ಕಾಲುವೆ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
Comments
Post a Comment