ನೂತನ ಸರ್ಕಾರದಿಂದ ನಾಡಿನ ರೈತರಿಗೆ ಮೊದಲ ಶಾಕ್...
ಜೈ ಶೇಗುಣಸಿ ಸುದ್ದಿ...
ನೂತನ ಸಮ್ಮಿಶ್ರ ಸರ್ಕಾರ ನಾಡಿನ ರೈತರಿಗೆ ಮೊದಲ ಶಾಕ್ ನೀಡಿದ್ದು, ಹಾಲಿನ ಖರೀದಿ ದರವನ್ನು 2 ರೂ. ಕಡಿತಗೊಳಿಸಲಾಗಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯ ನಾನಾ ಒಕ್ಕೂಟಗಳು ಹಾಲು ಉತ್ಪಾದಕರಿಂದ ಖರೀದಿಸುವ ದರದಲ್ಲಿ ಲೀಟರ್ ಗೆ 2 ರೂ. ವರೆಗೆ ಕಡಿತ ಮಾಡಿದ್ದು, ಜೂನ್ 1 ರಿಂದಲೇ ಜಾರಿಗೆ ಬಂದಿದೆ.
ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಹಾಲು ಉತ್ಪಾದನೆ ಹೆಚ್ಚಳವಾಗುತ್ತದೆ. ಮೇ-ಜೂನ್ ನಲ್ಲಿ ಅತ್ಯಧಿಕ ಪ್ರಮಾಣದ ಹಾಲು ಉತ್ಪತ್ತಿಯಾಗುತ್ತಿರುವ ಕಾರಣ ಹಾಲು ಒಕ್ಕೂಟಗಳಿಗೆ ಹೆಚ್ಚುವರಿ ಹಾಲು ಮಾರಾಟ ಮಾಡಲು ಆಗುವುದಿಲ್ಲ. ಈ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಿ ಮಾರಾಟ ಮಾಡಬೇಕು ಆದರೆ ಹಾಲಿನ ಪುಡಿಗೆ ಬೇಡಿಕೆ ಇಲ್ಲ. ಹಾಗಾಗಿ ದರ ಇಳಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ ಮಾಡಬೇಕೆಂದು ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ಕೊಡುತ್ತಿದೆ. ಆದರೆ ಹೆಚ್ಚು ಉತ್ಪಾದನೆಯಾದರೆ ಹಾಲು ನಿರ್ವಹಣೆ ಮಾಡುವುದು ಕಷ್ಟ ಎಂದು ಹಾಲು ಒಕ್ಕೂಟಗಳು ದರ ಇಳಿಕೆ ಮಾಡಿರುವುದು ಹೈನುಗಾರಿಕೆ ನೆಚ್ಚಿಕೊಂಡಿರುವ ಕುಟುಂಬಗಳಿಗೆ ಹೊಡೆತ ಬಿದ್ದಿದೆ.
ಬೆಂಗಳೂರು ಹಾಲು ಒಕ್ಕೂಟದಲ್ಲಿ 2 ರೂ. ಕಡಿತ ಮಾಡಲಾಗಿದೆ. ಇನ್ನೂ ಕೆಲವು ಕಡೆ 1.50-2 ರೂ. ವರೆಗೆ ದರ ಕಡಿತ ಮಾಡಿವೆ. ಆದರೆ, ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರದಲ್ಲಿ ಇಳಿಕೆಯಾಗವುದಿಲ್ಲ.

Comments
Post a Comment