ಕಬ್ಬಿನ ಬಾಕಿ ಶೀಘ್ರ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ

ಜೈ ಶೇಗುಣಸಿ ಸುದ್ದಿ...


ಬೆಳಗಾವಿ: 2017-18ನೇ ಸಾಲಿನಲ್ಲಿ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ತಕ್ಷಣವೇ ಎಫ್‌ಆರ್‌ಪಿ ಪ್ರಕಾರ ರೈತರಿಗೆ ಕಬ್ಬಿನ ಬಿಲ್ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಜೂ.20ರ ಒಳಗಾಗಿ ಬಾಕಿ ಕಬ್ಬಿನ ಬಿಲ್ ನೀಡುವಂತೆ ಸೂಚನೆ ನೀಡಲಾಗಿತ್ತು.ಅದಾದ ಬಳಿಕ ಅನೇಕ ಕಾರ್ಖಾನೆಗಳು ಬಾಕಿ ಹಣ ಪಾವತಿಸಿವೆ. ಕೆಲವು ಕಾರ್ಖಾನೆಗಳು ಮಾತ್ರ ಬಾಕಿ ಉಳಿಸಿಕೊಂಡಿವೆ. ಕಾಲಮಿತಿಯೊಳಗೆ ಬಾಕಿ ಹಣ ಪಾವತಿಸಬೇಕು ಎಂದು ಹೇಳಿದರು.

ಕಾರ್ಖಾನೆಗಳಿಗೆ ಕಬ್ಬು ಪೂರೈಸಿರುವ ರೈತರು ಸಂಕಷ್ಟದಲ್ಲಿದ್ದಾರೆ. ಕಾರ್ಖಾನೆಗಳು ಇದನ್ನು ಅರಿತುಕೊಂಡು ಅವರಿಗೆ ಬಾಕಿ ಹಣ ಪಾವತಿಸಬೇಕು.ಇಲ್ಲದಿದ್ದರೆ ಬಾಕಿ ಹಣ ವಸೂಲಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಆಸ್ಪದ ನೀಡಬಾರದು ಎಂದು ತಿಳಿಸಿದರು.

ಮುನವಳ್ಳಿಯ ರೇಣುಕಾ ಶುಗರ್ಸ್‌ ಪ್ರತಿನಿಧಿ ಮಾತನಾಡಿ, ಕಳೆದ ಸಭೆಯ ಬಳಿಕ ಇದುವರೆಗೆ 64 ಕೋಟಿ ರೂಪಾಯಿ ಬಾಕಿ ಹಣ ಪಾವತಿಸಲಾಗಿದೆ. ಉಳಿದ ಹಣ ಪಾವತಿಗೆ ಹದಿನೈದು ದಿನ ಕಾಲಾವಕಾಶ ಬೇಕು ಎಂದರು. ಹಾಲಸಿದ್ಧನಾಥ ಕಾರ್ಖಾನೆಯ ಪ್ರತಿನಿಧಿಯು ಎಂಟು ದಿನದಲ್ಲಿ ಬಾಕಿ ಪಾವತಿಸುವುದಾಗಿ ಭರವಸೆ ನೀಡಿದರು.
ರೇಣುಕಾ ಶುಗರ್ಸ್‌, ಕೊಕಟನೂರ ಸೋಮೇಶ್ವರ ಸಕ್ಕರೆ ಕಾರ್ಖಾನೆ, ಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ, ಶಿರಗುಪ್ಪಿ ಶುಗರ್ಸ್‌, ಕೊಳವಿಯ ಗೋಕಾಕ ಶುಗರ್ಸ್‌ ಮತ್ತಿತರ ಕಾರ್ಖಾನೆಗಳ ಪ್ರತಿನಿಧಿಗಳು ಮಾತನಾಡಿ, ಬಾಕಿ ಕಬ್ಬಿನ ಬಿಲ್ ಹಣವನ್ನು ಹಂತ ಹಂತವಾಗಿ ಪಾವತಿ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಪಾವತಿಸಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು, ಕಾರ್ಖಾನೆಯವರು ತಾವು ಕೇಳಿದ ಕಾಲಮಿತಿಯೊಳಗೆ ರೈತರಿಗೆ ಬಾಕಿ ಹಣ ಪಾವತಿಸಬೇಕು ಎಂದು ಸೂಚನೆ ನೀಡಿದರು.
ಜಿಪಂ ಸಿಇಒ ರಾಮಚಂದ್ರನ್ ಆರ್., ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮೊಖಾಶಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಕಿ ಸೈಯದ್ ಆಫ್ರಿನ್‌ಬಾನು ಬಳ್ಳಾರಿ ಮೊದಲಾವರು ಉಪಸ್ಥಿತರಿದ್ದರು

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18